ಫೆರೋಮೋನುಗಳು -
 	ಒಂದು ಜೀವಿಯಿಂದ (ದಾತೃ) ಹೊರಹೊರಟು ಅದೇ ಜಾತಿಯ ಇನ್ನೊಂದು ಜೀವಿಯನ್ನು ಮುಟ್ಟಿ (ಗ್ರಾಹಕ) ಇದರ ನಡವಳಿಕೆಯಲ್ಲಿ ಅಥವಾ ಲೈಂಗಿಕ ಚಟುವಟಿಕೆಗಳಲ್ಲಿ ಪ್ರತಿಕ್ರಿಯೆಯನ್ನು ಪ್ರಚೋದಿಸಬಲ್ಲ ವಸ್ತುಗಳು. ಕಾರ್ಲೆಸನ್ ಮತ್ತು ಲಾಷರ್ ಎಂಬವರ ನಿರೂಪಣೆ ಹೀಗಿದೆ (1959): ಒಂದು ಜೀವಿ ತನ್ನ ದೇಹದ ಹೊರಗಡೆ ವಿಸರ್ಜಿಸುವ ಮತ್ತು ಅದೇ ಜಾತಿಯ ಇನ್ನೊಂದು ಜೀವಿಯಿಂದ ಸ್ವೀಕೃತವಾಗಿ ಆ ಜೀವಿಯಲ್ಲಿ ವಿಶಿಷ್ಟವಾದ (ಉದಾಹರಣೆಗೆ ಸ್ಪಷ್ಟವಾದೊಂದು ನಡವಳಿಕೆಯನ್ನು ಅಥವಾ ಬೆಳೆವಣಿಗೆಯನ್ನು ಉಂಟುಮಾಡುವ) ಕ್ರಿಯಾಮಾರ್ಗಗಳನ್ನು ಪ್ರಚೋದಿಸುವ ವಸ್ತುಗಳೇ ಫೆರೋಮೋನುಗಳು. ಯಾವುದೊಂದು ಪರಿಸರದಲ್ಲಿ ಜೀವಿಸುವ ಪ್ರಾಣಿಗಳು ತಮ್ಮ ತಮ್ಮಲ್ಲಿ ಅಥವಾ ಇತರ ಪ್ರಾಣಿಗಳೊಂದಿಗೆ ಸಂಪರ್ಕ ಬೆಳೆಸುವ ಆವಶ್ಯಕತೆ ಇದೆ. ಉದಾಹರಣೆಗೆ ಆಡುಮಾತಿನ ಮೂಲಕ ಸಂಪರ್ಕ ಸಾಧಿಸಲಾರದ ಕೆಳದರ್ಜೆಯ ಪ್ರಾಣಿಗಳಾದ ಕೀಟಗಳು ಹಲವಾರು ರಾಸಾಯನಿಕಗಳನ್ನು ಉತ್ಪಾದಿಸಿ ವಾಯು ಅಥವಾ ನೀರಿನ ಮೂಲಕ ಅವನ್ನು ಪ್ರಸರಿಸಿ ಸಂಪರ್ಕ ಸಾಧಿಸುತ್ತವೆ. ಈ ವಿಶಿಷ್ಟ ರಾಸಾಯನಿಕಗಳನ್ನು ಗುರುತಿಸಬಲ್ಲ ಪ್ರಾಣಿಗಳು ಮಾತ್ರ ಅವುಗಳಿಂದ ಪ್ರಭಾವಿತವಾಗುತ್ತವೆ.

	ಫೆರೋಮೋನುಗಳಲ್ಲಿ ಎರಡು ವಿಧ: 1 ವಿಶಿಷ್ಟವಾಸನೆಯಿಂದ ಗುರುತಿಸಬಹುದಾದಂಥವು, 2 ರುಚಿಯಿಂದ ಗುರುತಿಸಬಹುದಾದಂಥವು. ಅಪಾಯಸೂಚಕ ವಸ್ತುಗಳು ಮತ್ತು ಲಿಂಗಾಕರ್ಷಕ ವಸ್ತುಗಳು ಮೊದಲನೆಯ ವರ್ಗಕ್ಕೆ ಸೇರಿದವಾಗಿವೆ. ಸಮುದಾಯದಲ್ಲಿ ಜೀವಿಸುವ ಪ್ರಾಣಿಗಳಲ್ಲಿ ಒಂದಕ್ಕೆ ಅಪಾಯಒದಗಿದಾಗ ಅದು ಇತರ ಪ್ರಾಣಿಗಳಿಗೆ ಎಚ್ಚರಿಕೆ ನೀಡಲು ವಿಶಿಷ್ಟ ರಾಸಾಯನಿಕವನ್ನು ಹೊರ ಚಿಮ್ಮಿಸುತ್ತದೆ. ಬಾಕ್ಸ್ ಮೀನು ಒಂದು ಬಗೆಯ ವಿಷವಸ್ತುವನ್ನು ಅಪಾಯ ಸೂಚಕದಂತೆ ಬಳಸುತ್ತದೆ. ಇದನ್ನು 3-ಅಸಿಟಾಕ್ಸಿಹೆಕ್ಸಾಡೆಕೋನಿಕ್ ಆಮ್ಲದ ಕೋಲಿನ್ ಕ್ಲೋರೈಡ್ ಎಸ್ಟರ್ ಎಂದು ಗುರುತಿಸಲಾಗಿದೆ. ಸಮುದ್ರ ಜೀವಿಗಳು ಅಪಾಯಸೂಚಕಗಳನ್ನು ಬಳಸುತ್ತವೆ ಎಂಬುದರ ಸುಳಿವು ದೊರಕಿದ್ದು ಈ ವಸ್ತುವನ್ನು ಗುರುತಿಸಿದಾಗಲೇ. ಇದು ಇತರ ವರ್ಗದ ಮೀನುಗಳಿಗೆ ನಂಜು. ಇರುವೆಗಳು ತೊಂದರೆ ಒದಗಿದಾಗ ಅಪಾಯಸೂಚಕಗಳನ್ನು ಹೊರಸೂಸುತ್ತವೆ. ಟರ್ಪೀನ್ ವರ್ಗಕ್ಕೆ ಸೇರಿದ ಈ ಅಪಾಯಸೂಚಕ ಮುಖ್ಯವಾಗಿ ಮೀಥೈಲ್-ಎನ್-ಅಮೈಲ್ ಕೀಟೋನ್, ಮೀಥೈಲ್ ಹೆಪ್ಟನೋನ್ ಮತ್ತು 2 ಹೆಪ್ಟನೋನುಗಳ ಮಿಶ್ರಣ. ಇರುವೆಗಳು ಹೊರಸೂಸುವ ಇತರ ಅಪಾಯಸೂಚಕ ವಸ್ತುಗಳೆಂದರೆ ಡೆಂಡ್ರಾಲೇಸಿನ್, ಸಿಟ್ರಾಲ್, ಸೆಟ್ರೊನೆಲಾಲುಗಳು.

	ಇರುವೆಗಳ ವಸತಿ ವ್ಯವಸ್ಥೆಯಲ್ಲಿ ಕೆಲಸಗಾರ ಇರುವೆಗಳು ವಲಸೆ ಹೋಗುವಾಗ ಮಾರ್ಗಸೂಚಕಗಳ ಜವಾಬ್ದಾರಿಯನ್ನು ವಹಿಸುತ್ತವೆ. ಇತರ ಇರುವೆಗಳು ದಾರಿ ತಪ್ಪದೆ ಚದರಿ ಹೋಗದಂತೆ ಮಾಡಲು ಜಾಡನ್ನು ವಿಶಿಷ್ಟವಾದ ಫೆರೋಮೋನಿನಿಂದ ಗುರುತಿಸುತ್ತವೆ. ಇರುವೆಗಳು ಸಾಲುಗಟ್ಟಿ ಹೋಗುವ ದೃಶ್ಯದ ಗುಟ್ಟು ಇದೇ. ಜಾಡಿನ ಪರಿಮಳವನ್ನು ತೊಡೆದು ಹಾಕಿದರೆ ಅಥವಾ ಸ್ವಲ್ಪ ದಪ್ಪದ ಅಡ್ಡಗೆರೆಯನ್ನು ಎಳೆದರೆ ಇರುವೆಗಳು ಅಡ್ಡಗೆರೆಯವರೆಗೆ ಅಥವಾ ಪರಿಮಳ ತೊಡೆದು ಹಾಕಿದವರೆಗೆ ಬಂದು ಮುಂದೆ ಹೋಗಲಾರದೆ ನಿಂತು ಬಿಡುತ್ತವೆ, ಅಥವಾ ಹಿಂತಿರುಗುತ್ತವೆ. ಈ ಮಾರ್ಗಸೂಚಕ ವಾಸನಾದ್ರವ್ಯವನ್ನು 2__ಮೀಥೈಲ್ ಹೆಪ್ಟಿನೋನ್ ಎಂದು ಗುರುತಿಸಲಾಗಿದೆ.
		
	ಅನೇಕ ಜೀವಿ ವರ್ಗಗಳು ಗಂಡು ಹೆಣ್ಣುಗಳ ಪರಸ್ಪರ ಆಕರ್ಷಣೆಗೆ ಮತ್ತು ಕಾಮಾಭಿಲಾಷೆಯ ಉದ್ರೇಕಕ್ಕೆ ಹಲವು ಬಗೆಯ ಫೆರೋಮೋನುಗಳನ್ನು ಬಳಸುತ್ತವೆ. ಕೀಟಗಳು, ಚಿಟ್ಟೆಗಳು, ಚಿಪ್ಪಿನ ಹೊದಿಕೆ ಇರುವ ಜೀವಗಳು, ಮೀನುಗಳು, ಸಾಲಮ್ಯಾಂಡರ್ ಹಾವುಗಳು ಮತ್ತು ಸ್ತನಿಗಳು ತಮ್ಮ ಸಂತಾನಾಭಿವೃದ್ಧಿಗೆ ಲಿಂಗಾಕರ್ಷಕ ವಸ್ತುಗಳನ್ನು ಉತ್ಪಾದಿಸಿ ವಾಯು ಅಥವಾ ನೀರಿನ ಮೂಲಕ ಪ್ರಸರಿಸುತ್ತವೆ. ಗಂಡು ಹಾಗೂ ಹೆಣ್ಣು ಎರಡೂ ಲೈಂಗಿಕ ಫೆರೋಮೋನುಗಳನ್ನು ಬಿಡುಗಡೆ ಮಾಡುತ್ತವೆ. ಒಂದೇ ಜಾತಿಯ ಗಂಡು ಹೆಣ್ಣುಗಳ ಫೆರೋಮೋನುಗಳ ರಾಸಾಯನಿಕ ಪ್ರಕೃತಿಯಲ್ಲಿ ವಿಭಿನ್ನತೆ ಉಂಟು. ಅಲ್ಲದೆ ಒಂದೇ ಮೂಲ ಬುಡಕಟ್ಟಿಗೆ ಸೇರಿದರೂ ಬೇರೆ ಒಳ ಜಾತಿಗೆ ಸೇರಿದ ಪ್ರಾಣಿಗಳು, ಉದಾಹರಣೆಗೆ ಇರುವೆಗಳು, ಹೊರಸೂಸುವ ಲೈಂಗಿಕ ಫೆರೋಮೋನುಗಳಲ್ಲಿ ವ್ಯತ್ಯಾಸವಿದೆ. ರೇಷ್ಮೆ ಚಿಟ್ಟೆ ಬೊಂಬೈಕಾಲ್ ಎಂಬ ಸುಗಂಧ ದ್ರವ್ಯವನ್ನೂ ಜಿಪ್ಸಿ ಪತಂಗ ಜಿಪ್ಟಾಲ್ ಎಂಬ ಪರಿಮಳವನ್ನೂ ಲೈಂಗಿಕ ಆಕರ್ಷಕಗಳಾಗಿ ಬಳಸುತ್ತವೆ. ಇವೆರಡೂ ಆಲ್ಕೊಹಾಲುಗಳು. ಸಿವೆಟ್ ಬೆಕ್ಕು ಸಿವಟೋನ್ ಗಂಧವನ್ನೂ ಕಸ್ತೂರಿ ಮೃಗ ಕಸ್ತೂರಿಯನ್ನೂ ಗಂಡುಹೆಣ್ಣಿನ ಸಂಪರ್ಕ ಸಾಧನವಾಗಿ ಬಳಸುತ್ತವೆ.

	ದೇಹಗ್ರಂಥಿಗಳಲ್ಲಿ ಫೆರೋಮೋನುಗಳು ಉತ್ಪತಿಯಾಗುತ್ತವೆ, ಗ್ರಂಥಿಗಳಲ್ಲಿ ಸಹ ವೈವಿಧ್ಯವುಂಟು. ಇವುಗಳಿಗೆ ಬಾಹ್ಯಸಂಪರ್ಕ ವಿಶೇಷ ಬಗೆಯ ನಾಳಗಳಿಂದ ಒದಗುತ್ತದೆ. ಹೆಣ್ಣು ಕೀಟಗಳು ಹೊರಬಿಡುವ ಲೈಂಗಿಕ ಫೆರೋಮೋನುಗಳು ಅವುಗಳ ಹೊಟ್ಟೆಯ ಕಡೆಯ ಭಾಗದ ಎರಡು ಖಂಡಗಳ ನಡುವಿನ ಪೊರೆಯಲ್ಲಿರುವ ಗ್ರಂಥಿಗಳಲ್ಲಿ ಉತ್ಪತ್ತಿಯಾಗುತ್ತವೆ. ಗ್ರಂಥಿಗಳನ್ನು ಅಮುಕಿ ಫೆರೋಮೋನುಗಳನ್ನು ಹೊರಹೊರಡಿಸಿ ವಾಯುವಿಗೆ ಒಡ್ಡುವುದರ ಮೂಲಕ ಪ್ರಸರಿಸಲಾಗುತ್ತದೆ. ಡನೈಡ್ ವರ್ಗದ ಗಂಡು ಚಿಟ್ಟೆಗಳು ತಮ್ಮ ಕೂದಲು ಕಡ್ಡಿಗಳ ಮೂಲಕ ಲೈಂಗಿಕ ಫೆರೋಮೋನುಗಳನ್ನು ವಿತರಣೆ ಮಾಡುತ್ತವೆ. ಈ ವರ್ಗಕ್ಕೆ ಸೇರಿದ ಡಾನಾಸ್ ಗಿಲಿಪ್ಪಸ್ ಬೆರಿನಿಸ್ ಕೀಟಗಳಲ್ಲಿ ಹಾರುತ್ತಿರುವ ಹೆಣ್ಣು ಚಿಟ್ಟೆಯನ್ನು ಗಂಡು ಹಿಂಬಾಲಿಸಿ ಅದರ ಮೀಸೆಯನ್ನು ಕೂದಲು ಕಡ್ಡಿಯಿಂದ ಸವರುತ್ತದೆ. ಹೆಣ್ಣು ಚಿಟ್ಟೆ ಹತ್ತಿರದ ಯಾವುದೊಂದು ಸಸ್ಯದ ಮೇಲೆ ಇಳಿಯುತ್ತದೆ. ಅನಂತರವೂ ಗಂಡು ಹೆಣ್ಣು ಸಮಾಧಾನ ತಳೆದು ಸಂಭೋಗ ಕ್ರಿಯೆ ಜರಗುವ ತನಕ ಸವರುವುದನ್ನು ಮುಂದುವರಿಸುತ್ತದೆ. ಕೂದಲು ಕಡ್ಡಿಯಿಂದ ಮೀಸೆಯನ್ನು ಸವರಿದಾಗ ಕೂದಲಕಡ್ಡಿಯ ಮೇಲಿರುವ ಕಾಮೋತ್ತೇಜಕ ಫೆರೋಮೋನ್ ಕಣಗಳು ಮೀಸೆಗೆ ರವಾನೆಯಾಗುತ್ತವೆ. ಕೂದಲುಕಡ್ಡಿ ಕಳಚಿದರೆ ಗಂಡು ನಪುಂಸಕವಾಗುತ್ತದೆ. ಗಲೇರಿಯಾ ಮೆಲ್ಲೋನೆಲ್ಲಾ ಜಾತಿಯ ಗಂಡು ಚಿಟ್ಟೆ ರೆಕ್ಕೆಯ ಗ್ರಂಥಗಳಲ್ಲಿ ಉಂಡೆಕನಾಲ್ ಎಂಬ ಲೈಂಗಿಕ ಫೆರೋಮೋನನ್ನು ಉತ್ಪಾದಿಸುತ್ತದೆ. ನಿಶ್ಚಿತ ದಿಕ್ಕಿನಲ್ಲಿ ಹೆಣ್ಣಿನ ಕಡೆಗೆ ಆಕರ್ಷಕ ವಸ್ತುವನ್ನು ಹರಿದು ಬಿಡಲು ಇದರಿಂದ ಅನುಕೂಲವಾಗಬಹುದು.

	ಸ್ತನಿಗಳ ಲೈಂಗಿಕ ಫೆರೋಮೋನುಗಳು ಅವುಗಳ ಜನನೇಂದ್ರಿಯ ಅಥವಾ ಅದರ ಸಮೀಪದಲ್ಲಿರುವ ಗ್ರಂಥಿಗಳಲ್ಲಿ ಉತ್ಪತ್ತಿಯಾಗುತ್ತವೆ. ರ್ಹೀಸಸ್ ಹೆಣ್ಣು ಕೋತಿಯ ಜನನೇಂದ್ರಿಯದಲ್ಲಿ ಉತ್ಪತ್ತಿಯಾಗುವ ಕೋಪ್ಸುಲಿನ್ ಅದೇ ಜಾತಿಯ ಗಂಡಿನಲ್ಲಿ ಕಾಮವನ್ನು ಕೆರಳಿಸುತ್ತದೆ. ಗಂಡು ಹ್ಯಾಮ್‍ಸ್ಟರುಗಳು ಸಂಭೋಗದ ಮುನ್ನ ಹೆಣ್ಣಿನ ಜನನೇಂದ್ರಿಯವನ್ನು ಮೂಸಿ ನೋಡಿ ನೆಕ್ಕುತ್ತವೆ. ವಾಸನೆಯನ್ನು ಗ್ರಹಿಸುವ ಗ್ರಂಥಿಗಳನ್ನು ತೆಗೆದುಹಾಕಿದರೆ ಗಂಡು ಹ್ಯಾಮ್‍ಸ್ಟರಿನ ಕಾಮಾಸಕ್ತಿ ಲೋಪವಾಗುತ್ತದೆ.

	ಕೀಟಗಳು ಪ್ರಸರಿಸುವ ಮುನ್ನೆಚ್ಚರಿಕೆ ಫೆರೋಮೋನುಗಳು ಅಪಾಯಸೂಚಕಗಳು. ಇವು ದವಡೆಯ ಗ್ರಂಥಿಗಳಿಂದಲೋ ಗುದದ್ವಾರದ ಗ್ರಂಥಿಗಳಿಂದಲೊ ಅಥವಾ ಚುಚ್ಚು ಕೊಂಡಿಗಳಿಂದಲೋ ಉತ್ಪತ್ತಿಯಾಗುತ್ತವೆ. ಗ್ರಂಥಿಗಳಿಂದ ಹೊರಬಿದ್ದ ವಸ್ತುಗಳು ಶತ್ರುವಿನ ಮೇಲೆರಗಿ ಅದನ್ನು ಆಕ್ರಮಣಕಾರಿ ಎಂದು ಹೆಸರಿಸುತ್ತವೆ. ಅಪಾಯಸೂಚಕಗಳು ಬಲುಮಟ್ಟಿಗೆ ಸಂಘಜೀವಿಗಳಲ್ಲಿ ಕಂಡುಬರುತ್ತವೆ. ವಾಯುವಿನಲ್ಲಿ ಪ್ರಸಾರವಾಗುವ ಅಪಾಯಸೂಚಕಗಳು ಆ ಸಮಾಜಕ್ಕೆ ಸೇರಿದ ಕೀಟಗಳಿಗೆ ಅಪಾಯ ಒದಗಿ ಬರುವ ಸೂಚನೆಯನ್ನು ಕೊಡುತ್ತವೆ. ಚುಚ್ಚುಕೊಂಡಿ ವಿಷವನ್ನು ಮಾತ್ರವಲ್ಲದೆ ಅಪಾಯ ಸೂಚಕಗಳನ್ನೂ ತಯಾರಿಸುತ್ತದೆ. ಶತ್ರುವನ್ನು ಚುಚ್ಚಿದಾಗ ವಿಷದೊಂದಿಗೆ ಇವೂ ಹೊರಬಿದ್ದು ಸಮೀಪದಲ್ಲಿರುವ ಬಂಧುಗಳನ್ನು ಎಚ್ಚರಿಸುತ್ತವೆ. ವೆಸ್ಪಾವರ್ಗದ ಕಣಜಗಳು ಇಂಥ ವ್ಯವಸ್ಥೆಗೆ ಉದಾಹರಣೆ. ಜೇನುಹುಳು ತಾನು ಕಚ್ಚಿದ ಜಾಗದಲ್ಲಿ ಐಸೊಅಮೈಲ್ ಅಸಿಟೇಟ್ ಎಂಬ ವಾಸನಾದ್ರವ್ಯವನ್ನು ಬಿಡುತ್ತದೆ. ಇತರ ಜೇನುಹುಳುಗಳು ಅದೇ ಜಾಗದಲ್ಲಿ ಕಚ್ಚಲಿ ಎಂಬುದು ಉದ್ದೇಶ. ಫಾರ್ಮಿಕ್ ವರ್ಗದ ಇರುವೆಗಳು ಹೊರಸೂಸುವ ಫಾರ್ಮಿಕ್ ಆಮ್ಲ ಅಪಾಯಸೂಚಕ ಮಾತ್ರವಲ್ಲದೆ ರಕ್ಷಣಾ ಸಾಧನೆಯೂ ಹೌದು.

	ಜೀವಿಗಳು ಫೆರೋವೋನನ್ನು ಸಂಶ್ಲೇಷಿಸುವ ವಿಧಾನ ಇನ್ನೂ ತಿಳಿದು ಬಂದಿಲ್ಲ. ಹಲವಾರು ಫೆರೋಮೋನುಗಳು ಮೇದೋಆಮ್ಲ ಮತ್ತು ಟರ್ಪೀನುಗಳಿಗೆ ಸಂಬಂಧಿಸಿವೆಯಾದ್ದರಿಂದ ಈ ಮೂಲವಸ್ತುಗಳ ಪರಿವರ್ತನೆಯಿಂದ ದೊರಕುತ್ತವೆ ಎಂದು ನಿರೀಕ್ಷಿಸಬಹುದು. ಅಕಾಂಥೋ ಮಯೋಪ್ಸ ಕ್ಲಾವಿಗರ್ ಮೆಲೋವಿಕ್ ಆಮ್ಲವನ್ನು (ಮಾನೋಟರ್ಪೀನ್) ಅಪಾಯಸೂಚಕವನ್ನಾಗಿ ಪರಿವರ್ತಿಸಬಲ್ಲದು. ಇವೇ ವಸ್ತುಗಳು ಅಥವಾ ಸಂಬಂಧಿತ ವಸ್ತುಗಳು ಸಸ್ಯಗಳಲ್ಲಿಯೂ ಉತ್ಪತ್ತಿಯಾಗುವುದರಿಂದ ಅನೇಕ ಪ್ರಾಣಿಗಳು ಇವನ್ನು ಸಸ್ಯಗಳಿಂದ ಸಂಪಾದಿಸಿ ಫೆರೋಮೋನುಗಳಾಗಿ ಬಳಸುತ್ತವೆ ಎಂದು ನಂಬಲಾಗಿದೆ.

	ಲೈಂಗಿಕ ಫೆರೋಮೋನುಗಳ ವಿಸರ್ಜನೆಗೆ ನಿಯಮಗಳುಂಟು. ದಿನದ ವೇಳೆ ಹವಾಪರಿಸ್ಥಿತಿ ಮುಂತಾದವು ವಿಸರ್ಜನೆಯನ್ನು ನಿಯಂತ್ರಿಸುತ್ತವೆ. ಅನೇಕ ಸಂದರ್ಭಗಳಲ್ಲಿ ಹೆಣ್ಣಿಗೆ ಮೊಟ್ಟೆ ಇಡಲು ಅನುಕೂಲಕರವಾದ ಗಿಡಗಳ ಸನಿಹ ಸಹ ಮುಖ್ಯ. ಆಂಧಿರೇ ಪಾಲಿಫೀಮಸ್ ಜಾತಿಯ ರೇಷ್ಮೆಹುಳುವಿಳ ಹೆಣ್ಣು ಲೈಂಗಿಕ ಫೆರೋಮೋನಿನ ವಿಸರ್ಜನೆಗೆ ರೆಡ್‍ವುಡ್ ಎಲೆಗಳಿಂದ ಹೊರಹೊರಡುವ ಟ್ರಾನ್-2 ಹೆಕ್ಸಿನಾಲ್ ಪ್ರೇರಕ.

	ಫೆರೋಮೋನುಗಳು ಪರಿಣಾಮಕಾರಿಗಳಾಗಲು ವಾಯುವಿನಲ್ಲಿ ಅಥವಾ ನೀರಿನಲ್ಲಿ ವ್ಯಾಪಿಸುವ ಗುಣ ಪಡೆದಿರುಬೇಕು. ಅವು ವ್ಯಾಪಿಸುವ ರೀತಿಯನ್ನು ಗಣಿತ ಪ್ರತಿರೂಪವೊಂದರ ನೆರವಿನಿಂದ ವಿವರಿಸಬಹುದು. ವಾಯು ನಿಶ್ಚಲವಾಗಿದ್ದು ಫೆರೋಮೋನ್ ಇತರ ಅಣುಗಳೊಂದಿಗೆ ವರ್ತಿಸದಿದ್ದರೆ ಹಾಗೂ ಇತರ ವಸ್ತುಗಳಿಂದ ಅಧಿಶೋಷಿತವಾಗದಿದ್ದರೆ ಅದು ಸರಳ ಪ್ರಸರಣ ನಿಯಮಕ್ಕೆ ಅನುಸಾರವಾಗಿ ವಾಯುವಿನಲ್ಲಿ ಹರಡುತ್ತದೆ ಎಂದು ಪ್ರತಿರೂಪ ತಿಳಿಸುತ್ತದೆ. ಮೂಲದಿಂದ ಸ್ವಲ್ಪ ದೂರವಿರುವ ಯಾವುದೇ ಒಂದು ಜಾಗದಲ್ಲಿ ಫೆರೋಮೋನಿನ ಸಾರತೆ ಅದು ಗ್ರಂಥಿಯಿಂದ ಹೊರಹೊರಡುವ ದರ, ಅದರ ಪ್ರಸರಣ ಸ್ಥಿರಾಂಕ, ಮೂಲಕ್ಕೂ ಆ ಜಾಗಕ್ಕೂ ನಡುವೆ ಇರುವ ಅಂತರ ಮತ್ತು ವಿಸರ್ಜನೆ ಪ್ರಾರಂಭವಾದ ಬಳಿಕ ಕಳೆದ ವೇಳೆ ಇವನ್ನು ಅವಲಂಬಿಸುತ್ತದೆ. ಫೆರೋಮೋನನ್ನು ಗ್ರಹಿಸುವ ಜೀವಿ ಅದರಿಂದ ಪ್ರಭಾವಿತವಾಗಲು ಬೇಕಾಗುವ ಕನಿಷ್ಠ ಸಾರತೆಯನ್ನು ಗೊತ್ತುಮಾಡಬಹುದು. ಇದಕ್ಕೆ ದೇಹಲಿಸಾರತೆ ಎಂದು ಹೆಸರು. ಒಂದು ಫೆರೋಮೋನಿನ ದೇಹಲಿ ಸಾರತೆ ಮತ್ತು ಸಂದೇಶ ಪ್ರಸಾರಕ್ಕೆ ಬಳಸುವ ಪ್ರಮಾಣ ಗೊತ್ತಿದ್ದರೆ ಸಂದೇಶ ಪರಿಣಾಮಕಾರಿಯಾಗಿ ಮುಟ್ಟಬಲ್ಲ ದೂರ (ಮೂಲದಿಂದ) ಮತ್ತು ಅದು ಒಂದೆಡೆಯಲ್ಲಿ ಉಳಿಯಬಲ್ಲ ಅವಧಿಗಳನ್ನು ಗಣಿಸಬಹುದು. ದೇಹಲಿ ಸಾರತೆ ಕಡಿಮೆಯಾದಂತೆ ಪ್ರಸರಣ ದೂರ ಹೆಚ್ಚುತ್ತದೆ.

	ವಾಯುವಿನಲ್ಲಿ ಪ್ರಸರಿತವಾಗುವ ಫೆರೋಮೋನುಗಳ ಸಂದರ್ಭದಲ್ಲಿ ಅವುಗಳ ಬಾಷ್ಪಶೀಲತೆ ಅವು ಪರಿಣಾಮಕಾರಿಯಾಗಬಲ್ಲ ಮಟ್ಟದಲ್ಲಿ ಹೊರಹೊರಡುತ್ತಿವೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುವ ಮುಖ್ಯ ಗುಣವಾಗಿದೆ. ಬಾಷ್ಪಶೀಲತೆಗೂ ಅಣು ತೂಕಕ್ಕೂ, ಕೆಲವು ವಿಶೇಷ ಸಂದರ್ಭಗಳ ವಿನಾ, ಸಂಬಂಧ ಉಂಟು. ವಾಯುವಿನಲ್ಲಿ ಪ್ರಸಾರವಾಗುವ ಫೆರೋಮೋನುಗಳ ಅಣುತೂಕ 80ರಿಂದ 300ರ ವರೆಗೆ ಮಾತ್ರ. ನೀರಿನಲ್ಲಿ ಹರಡುವ ಫೆರೋಮೋನುಗಳ ಸಂದರ್ಭದಲ್ಲಿ ವಿಲೀನತೆ ಮುಖ್ಯ ಗುಣವಾಗುತ್ತದೆ. ಪ್ರೊಟೋಜೋವಾ ವರ್ಗದ ವಾಲ್ಕೊತ್ಸ ಮತ್ತು ಪಾರಾಮೀಸಿಯಮುಗಳ ಲೈಂಗಿಕ ಫೆರೋಮೋನುಗಳು ಪ್ರೋಟೀನುಗಳು. ವಾಯು ಮಾತ್ರವಲ್ಲದೆ ನೀರಿನಲ್ಲಿ ವಿಸರ್ಜನೆಯಾಗುವ ಫೆರೋಮೋನುಗಳಲ್ಲಿ ಸಹ ವೈವಿಧ್ಯವನ್ನು ಕಾಣುತ್ತೇವೆ. ಉದಾಹರಣೆಗೆ ನೀರಿನಲ್ಲಿರುವ ಶಿಲೀಂಧ್ರ ಅಲೋಮೈಸಿಸ್, ಸೈರೆನಿನ್ ಎಂಬ ಸೆಸ್ಕ್ವಿಟರ್ಪೀನನ್ನು ಫೆರೋಮೋನಿನಂತೆ ಬಳಸುತ್ತದೆ. ಪಾಚಿಶಿಲೀಂಧ್ರವಾದ ಡಿಕ್ಟಿಸೋಲಿಯಮ್ ಡಿಸ್ಕಾಯಿಡೀಯಮಿನಲ್ಲಿ 3, 5 ಚಕ್ರೀಯ ಂಒP ಫೆರೋಮೋನಿನಂತೆ ಮರ್ತಿಸುತ್ತದೆ. ಇವೆರಡರ ರಾಸಾಯನಿಕ ವೃತ್ತಾಂತ ತೀರ ಭಿನ್ನ.

	ಫೆರೋಮೋನುಗಳು ಪ್ರಚೋದಿಸುವ ಪ್ರತಿಕ್ರಿಯೆಯ ಆಧಾರದ ಮೇಲೆ ಎರಡು ಪಂಗಡಗಳಾಗಿ ವರ್ಗೀಕರಿಸಬಹುದು: 1 ಒಡನೆ ಪ್ರತಿಕ್ರಿಯೆ ಪ್ರಚೋದಿಸುವಂಥವು, 2 ನಿಧಾನವಾಗಿ (ಉದಾಹರಣೆಗೆ ಬೆಳೆವಣಿಗೆಯಲ್ಲಿ) ಪ್ರತಿಕ್ರಿಯೆ ಉಂಟುಮಾಡುವಂಥವು. ಅಪಾಯಸೂಚಕಗಳು ಮೊದಲನೆಯ ವರ್ಗದವು. ತದ್ವಿರುದ್ಧವಾಗಿ ರಾಣಿ ಜೇನು ಬಿಡುಗಡೆ ಮಾಡುವ 9 ಕೀಟೋ 2 ಡೆಸಿನೋಯಿಕ್ ಆಮ್ಲ ಕೆಲಸಗಾರ ಜೇನುಹುಳುಗಳ ಗರ್ಭಕೋಶ ಬೆಳೆಯದಂತೆ ತಡೆಯುತ್ತದೆಯಾಗಿ ಎರಡನೆಯ ವರ್ಗಕ್ಕೆ ಸೇರುತ್ತದೆ.

	ತತ್‍ಕ್ಷಣ ಪ್ರತಿಕ್ರಿಯೆ ಉಂಟುಮಾಡುವ ಫೆರೋಮೋನುಗಳು ಪ್ರಚೋದಿಸುವ ಪ್ರತಿಕ್ರಿಯೆಗಳಲ್ಲಿ ಸಹ ವೈವಿಧ್ಯ ಉಂಟು. ಲೈಂಗಿಕಾಕರ್ಷಕಗಳನ್ನು ಗುರುತಿಸುವ ಚಿಟ್ಟೆಗಳು ಮೂಲದಿಂದ ಹೊರಬಿದ್ದ ವಾಸನೆಯ ಜಾಡನ್ನೇ ಹಿಡಿದು ಮೂಲವನ್ನು ಅನುಸರಿಸಿ ಗಾಳಿ ಬೀಸುವ ದಿಕ್ಕಿಗೆ ವಿರುದ್ಧವಾಗಿ ಹಾರುತ್ತವೆ. ಪಥದಿಂದ ವಿಚಲಿತವಾದಾಗ ವಾಸನೆಯ ಜಾಡು ತಪ್ಪುತ್ತದೆಯಾಗಿ ಮತ್ತೆ ವಾಸನೆಯ ಜಾಡು ಸಿಗುವವರೆಗೆ ಹುಡುಕಾಡಿ ಮೊದಲಿನ ಜಾಡಿಗೆ ಸೇರುತ್ತವೆ. ಮೂಲವನ್ನು ತಲಪಿದಂತೆ ವಾಸನೆಯ ತೀವ್ರತೆ ಒಮ್ಮೆಲೇ ಏರುತ್ತದೆ ಮತ್ತು ಹಾರುತ್ತಿರುವ ಚಿಟ್ಟೆ, ಫೆರೋಮೋನನ್ನು ಬಿಡುಗಡೆ ಮಾಡುತ್ತಿರುವ ಪ್ರಾಣಿಯನ್ನು ಗುರುತಿಸುತ್ತದೆ. ಮುಂದೆ ಪ್ರಣಯ ಲೀಲೆ ಪ್ರಾರಂಭವಾಗಿ ಸಂಭೋಗದಲ್ಲಿ ಪರ್ಯವಸಾನವಾಗುವ ಹಂತ ಮುಟ್ಟಲು ಹಲವಾರು ಫೆರೋಮೋನುಗಳ ಸಹಾಯ ಬೇಕಾಗಬಹುದು. ಫ್ಲೋಗೋಫೇರಾ ಮೆಟೆಕ್ಯುಲೋಸಾ ಜಾತಿಯ ಚಿಟ್ಟೆಯಲ್ಲಿ ಹೆಣ್ಣು ಗಂಡನ್ನು ಆಕರ್ಷಿಸುವ ಫೆರೋಮೋನನ್ನು ಬಿಡುಗಡೆ ಮಾಡುತ್ತದೆ. ಗಂಡು ಹೆಣ್ಣಿನೆಡೆಗೆ ಹಾರಿಹೋಗಿ ತನ್ನ ಹೊಟ್ಟೆಯ ಮೇಲಿನ ಕೂದಲು ಗ್ರಂಥಿಯ ಪರಿಮಳವನ್ನು ಅದರ ಮೇಲೆ ಸಿಂಪಡಿಸುತ್ತದೆ. ಸಂಭೋಗ ತತ್‍ಕ್ಷಣ ಜರಗುತ್ತದೆ. ಗಂಡಿನ ಪರಿಮಳ ಸ್ವಂತ ಜಾತಿಯ ಹೆಣ್ಣನ್ನು ಮಾತ್ರ ಉದ್ರೇಕಿಸುತ್ತದೆ. ಹೀಗಾಗಿ ಈ ಫೆರೋಮೋನ್ ಆಕರ್ಷಕ ವಸ್ತುವಿನಂತೆ ವರ್ತಿಸುವುದಲ್ಲದೆ ಬೆರಕೆ ಜಾತಿಯ ಪೀಳಿಗೆಗಳು ಹುಟ್ಟದಂತೆ ತಡೆಯಬಲ್ಲದು ಕೂಡ. ರಾಣಿಚಿಟ್ಟೆ ಜಾತಿಯ ಗಂಡು ಹುಳುಗಳು ಎರಡು ಬಗೆಯ ಫೆರೋಮೋನುಗಳನ್ನು ವಿಸರ್ಜಿಸುತ್ತವೆ. ಇವೆರಡೂ ಹೆಣ್ಣಿನ ಮೀಸೆಯಿಂದ ಗ್ರಹಿತವಾಗಿ ಪ್ರತಿಕ್ರಿಯೆ ಉಂಟುಮಾಡುತ್ತವೆ.

	ಸಮಾಜ ಜೀವಿಗಳಲ್ಲಿ ಅಪಾಯಸೂಚಕ ಫೆರೋಮೋನುಗಳು ಎರಡು ಬಗೆಯ ಪ್ರತಿಕ್ರಿಯೆ ಉಂಟುಮಾಡುತ್ತವೆ. ಕೆಲವು ಜಾತಿಗಳಲ್ಲಿ ಅಪಾಯಸೂಚಕಗಳು ಸಂಘದ ಸದಸ್ಯರು ಚದರಿ ಹೋಗುವಂತೆ ಮಾಡಿದರೆ ಇನ್ನೊಂದು ಜಾತಿಯಲ್ಲಿ ಸದಸ್ಯರು ಅಪಾಯ ಸ್ಥಳಕ್ಕೆ ಧಾವಿಸಿ ಬಂದು ಹೋರಾಡುವ ಮನೋಭಾವವನ್ನು ಪ್ರಚೋದಿಸುತ್ತವೆ. ಎ. ಕ್ಲಾವಿಗರ್ ಇರುವೆಗಳಲ್ಲಿ ಅಪಾಯಸೂಚಕಗಳು ಗುಂಪುಗೂಡಿಸುತ್ತವೆ. ಈ ಜಾತಿಯ ಇರುವೆಗಳು ದಟ್ಟ ವಸತಿಯಲ್ಲಿ ಜೀವಿಸುವುದರಿಂದ ಎರಡು ಅನುಕೂಲತೆ ಉಂಟು. ಇವು ಅಧಿಕ ರಾಶಿಯಲ್ಲಿ ಅನೇಕ ರಕ್ಷಣಾ ಸಾಧನಗಳನ್ನು ಹೊರ ಸೂಸಬಲ್ಲವು. ಒಂದೆಡೆಯಲ್ಲಿ ಕೇಂದ್ರೀಕೃತವಾಗಿ ಶತ್ರುವನ್ನು ಹೊಡದೋಡಿಸಬಲ್ಲವು. ಆದರೆ ಲಾಸಿಯಸ್ ಏಲಿಯನಸ್ ಜಾತಿಯ ಇರುವೆಗಳು ಅಪಾಯಸೂಚಕ ಹಾಗೂ ರಕ್ಷಣೆಮಾಡಬಲ್ಲ ಫೆರೋಮೋನನ್ನು ಬಿಡುಗಡೆ ಮಾಡುತ್ತವೆಯಾದರೂ ವಸತಿಯಲ್ಲಿ ಸಾಂದ್ರತೆ ಕಡಿಮೆ. ಬಿಡುಗಡೆಯಾಗುವ ಫೆರೋಮೋನಿನ ಮೊತ್ತವೂ ಕಡಿಮೆ. ಹೀಗಾಗಿ ಅವು ನಿಂತು ಹೋರಾಡುವುದು ಜಾಣತನವಲ್ಲ. ಎಂತಲೇ ಅಪಾಯ ಸೂಚನೆ ಒದಗಿದ ಒಡನೆ ಕಾಲಿಗೆ ಬುದ್ಧಿ ಹೇಳುತ್ತವೆ. ಅಪಾಯಸೂಚಕಗಳನ್ನು ಸ್ವೀಕರಿಸುವ ಪ್ರಾಣಿ ತಾನೇ ಫೆರೋಮೋನನ್ನು ಉತ್ಪಾದಿಸಿ ಪುನಃ ಪ್ರಸರಿಸುವುದಿಲ್ಲ. ಅಲ್ಲದೆ ಎ. ಕ್ಲಾವಿಗರ್ ಅಪಾಯ ಸಾಕ್ಷಾತ್ತಾಗಿ ಒದಗಿದ ಹೊರತು ತನ್ನ ಅಪಾಯಸೂಚಕವನ್ನು ಬಿಡುಗಡೆ ಮಾಡುವುದಿಲ್ಲ.

	ಫೆರೋಮೋನುಗಳು ಅವನ್ನು ಗ್ರಹಿಸುವ ಜೀವಿಯಲ್ಲಿ ಯಾವ ರೀತಿ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ ಎಂಬುದು ಇನ್ನೂ ಬಗೆಹರಿಯದ ಸಮಸ್ಯೆ. ಮೂಗು ಮತ್ತು ನಾಲಗೆಗಳು ಗುರುತಿಸುವ ಫೆರೋಮೋನುಗಳು ಇಂದ್ರಿಯಗಳಲ್ಲಿರುವ ವಿಶಿಷ್ಟ ಕೋಶಗಳೊಂದಿಗೆ ವರ್ತಿಸಿ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತವೆ. ಕೀಟಗಳಲ್ಲಿ ಮೀಸೆ ಗ್ರಾಹಕ ಸಾಧನ. ಮೀಸೆಗಳಲ್ಲಿ ನರಕೋಶದ ಅತಿಸೂಕ್ಷ್ಮ ತಂತುಗಳು ಗ್ರಹಿಸುವ ಭಾಗಗಳಾದ ಕೂದಲು, ಗುಳಿಗಳು ಹಾಗೂ ತಟ್ಟೆಗಳಂತಿರುವ ಭಾಗಗಳಲ್ಲಿ ವ್ಯಾಪಿಸಿರುತ್ತವೆ. ವಾಸನಾದ್ರವ್ಯಗಳು ವಿಶಿಷ್ಟ ರಂಧ್ರಗಳ ಮೂಲಕ ಒಳಹೊಕ್ಕು ಈ ತಂತುಗಳನ್ನು ಮುಟ್ಟುತ್ತವೆ. ತಂತುಗಳ ಮೇಲ್ಮೈಯಲ್ಲಿ ವಾಸನಾದ್ರವ್ಯಗಳನ್ನು ಗುರುತಿಸಿ ಅವನ್ನು ಬಂಧಿಸುವ ವಿಶಿಷ್ಟ ಸ್ವಾಗತಕಾರ ಅಣುಗಳಿರುತ್ತವೆ. ಇವೆರಡರ ಸಂಪರ್ಕದ ಪರಿಣಾಮವಾಗಿ ವಿದ್ಯುತ್ ಪ್ರವಾಹ ಸಂಚರಿಸುತ್ತದೆ. ವಾಸನಾದ್ರವ್ಯದ ಅನೇಕಾನೇಕ ಅಣುಗಳು ನರಕೋಶವನ್ನು ಒಮ್ಮಲೇ ಮುಟ್ಟಿದಾಗ ವಿದ್ಯುತ್ ಪ್ರವಾಹ ಬಲಗೊಂಡು ಪ್ರತಿಕ್ರಿಯೆಯನ್ನು ಹುಟ್ಟಿಹಾಕುತ್ತವೆ. ಫೆರೋಮೋನ್ ಸ್ವಾಗತಕಾರ ಅಣುಗಳು ಪ್ರೋಟೀನುಗಳಿರಬಹುದು. ಜೀವಿಗೆ ಅಗತ್ಯವಾದಾಗ ಮಾತ್ರ ಇವು ಉತ್ಪತ್ತಿಯಾಗುತ್ತವೆ. ಅಲ್ಲದೆ ಇವು ಲಿಂಗ ವೈಶಿಷ್ಟ್ಯವನ್ನೂ ಪ್ರದರ್ಶಿಸುತ್ತವೆ.

	ಸ್ವಾಗತಕಾರ ಅಣು ವಾಸನಾದ್ರವ್ಯವನ್ನು ಗುರುತಿಸುವ ಹಾಗೂ ಅದರೊಂದಿಗೆ ಬದ್ಧವಾಗುವ ವಿಧಾನದ ಅರಿವು ನಮಗಿನ್ನೂ ಇಲ್ಲ. ಆಂಥಿರೇ ಪರ್ನೈ ಕೀಟವರ್ಗದ ಗಂಡುಹುಳುಗಳು ಹೆಣ್ಣಿನ ಫೆರೋಮೋನನ್ನು ಗೊತ್ತುಮಾಡಲು ಮೀಸೆಯನ್ನು ಬಳಸುತ್ತವೆ. ಮೀಸೆಯನ್ನು ತೊಳೆದಾಗ ಪ್ರತಿಕ್ರಿಯೆ ಬಲುಮಟ್ಟಿಗೆ ಕುಂಠಿತವಾಗುತ್ತದೆ. ಈ ಸ್ವೀಕಾರ ಅಣು ಪ್ರೋಟೀನೆಂದು ಗುರುತಿಸಲಾಗಿದೆ. ಹೆಣ್ಣಿನ ಮೀಸೆಯಲ್ಲಿ ಈ ಪ್ರೋಟೀನ್ ಕಂಡು ಬರುವುದಿಲ್ಲ.

	ಮೀಸೆಗಳಲ್ಲಿರುವ ಸ್ವಾಗತಕಾರ ಅಣುವಿನ ಗ್ರಹಣಸಾಮಥ್ರ್ಯ ಸೂಕ್ಷ್ಮ ಸಂವೇದಕವಾಗಿದೆ. ಇದು ಫೆರೋಮೋನಿನ ಒಂದೇ ಒಂದು ಅಣುವನ್ನು ಸಹ ಪತ್ತೆ ಮಾಡಬಲ್ಲದು. ಫೆರೋಮೋನ್ ಮತ್ತು ಸ್ವಾಗತಕಾರ ಅಣುವಿನ ಪರಸ್ಪರ ಕ್ರಿಯೆ ಬಲುಮಟ್ಟಿಗೆ ವಿಶಿಷ್ಟ ರೀತಿಯಲ್ಲಿ ನಡೆಯುತ್ತದೆ. ಅಪಾಯಸೂಚಕ ಅಣುಗಳಿಗಿಂತ ಲೈಂಗಿಕ ಆಕರ್ಷಕ ವಸ್ತುಗಳು ಹೆಚ್ಚಿನ ವೈಶಿಷ್ಟ್ಯ ತೋರಿಸುತ್ತವೆ. ಅಪಾಯ ಸೂಚಕಗಳ ಕಾರ್ಯಕ್ಕೂ ಅವುಗಳ ಆಕಾರಕ್ಕೂ ಸಂಬಂಧವಿದೆ. ಉದಾಹರಣೆಗೆ 2-ಹೆಪ್ಟನೋನ್ ಮತ್ತು ಟಿ-ಬ್ಯುಟೈಲ್ ಅಸಿಟೇಟುಗಳ ರಸಾಯನ ವೃತ್ತಾಂತ ವಿಭಿನ್ನವಾಗಿದ್ದರೂ ಅವುಗಳ ಜ್ಯಾಮಿತೀಯ ಆಕಾರದಲ್ಲಿ ಸಾದೃಶ್ಯ ಉಂಟು. ಇವೆರಡು ಉತ್ತಮ ದರ್ಜೆಯ ಕ್ರಿಯಾಶೀಲ ವಸ್ತುಗಳು.

	ಲೈಂಗಿಕ ಫೆರೋಮೋನುಗಳಲ್ಲಿ ಅಣುವಿನ ಆಕಾರದ ವಿಷಯದಲ್ಲಿ ಹೆಚ್ಚಿನ ವೈಶಿಷ್ಟ್ಯ ಕಂಡುಬರುತ್ತದೆ. ಅನೇಕ ಸಂದರ್ಭಗಳಲ್ಲಿ ಸಹಜ ಫೆರೋಮೋನಿನ ಜ್ಯಾಮಿತೀಯ ಹಾಗೂ ರಾಶ್ಮಿಕ ಸಮಾಂಶಿ ಅಣುಗಳು ಮಾತ್ರ ಪರಿಣಾಮಕಾರಿಯಾಗುತ್ತವೆ. ವಿರುದ್ಧ ರಾಶ್ಮಿಕ ಚಟುವಟಿಕೆಯುಳ್ಳ ಅಣುಗಳು ಪ್ರತಿಕ್ರಿಯೆ ತಲೆದೋರದಂತೆ ಅಡ್ಡಿಯನ್ನೇ ಒಡ್ಡುತ್ತವೆ. ಆದರೆ ಒಂದು ಜಾತಿಯ ಕೀಟಗಳಲ್ಲಿ ಪ್ರತಿಕ್ರಿಯೆಗೆ ಅಡ್ಡಿಯೊಡ್ಡುವ ಸಮಾಂಶಿಗಳು ಇನ್ನೊಂದು ಜಾತಿಯಲ್ಲಿ ಪ್ರತಿಕ್ರಿಯೆಯನ್ನು ಪ್ರಚೋದಿಸಬಹುದು. ಈ ಬಗೆಯ ವೈಶಿಷ್ಟ್ಯದಿಂದ ಜಾತಿಸಂಕರಣಕ್ಕೆ ಅವಕಾಶ ಇಲ್ಲದಂತಾಗಿ ಆಯಾ ಜಾತಿಯ ಕೀಟಗಳು ತಮ್ಮ ಜಾತಿಯ ಅಭಿವೃದ್ಧಿಯನ್ನು ಮಾತ್ರ ಸಾಧಿಸಲು ಅನುಕೂಲವಾಗುತ್ತದೆ.

	ಒಂದೇ ಫೆರೋಮೋನ್ ಎರಡು ಅಥವಾ ಹೆಚ್ಚಿನ ಬಗೆಯ ಕಾರ್ಯ ನಿರ್ವಹಿಸುವ ಉದಾಹರಣೆ ಉಂಟು, ಕಾಮೋತ್ತೇಜಕಗಳು ಬೇಟೆಯನ್ನು ಅರಸುವ ಸಾಧನಗಳಾಗಬಹುದು. ಟೆಮ್ನೋಕಿಲ ಎಂಬ ಕಣಜ ಡೆಂಡ್ರೋಕ್ಟನಸ್ ಎಂಬ ಮರದ ಚಿಪ್ಪಿನ ಕಣಜವನ್ನು ತಿನ್ನುತ್ತದೆ. ಡೆಂಡ್ರೋಕ್ಟನಸ್ ಹುಳುಗಳು ಗುಂಪುಗೂಡಿಸಲು ಪ್ರಸರಿಸುವ ಫೆರೋಮೋನ್ ಟೆಮ್ನೋಕಿಲಕ್ಕೆ ಭೋಜನಾಹ್ವಾನವನ್ನು ಕಾಯುತ್ತದೆ. ಇರುವೆಯ ಮರಿಹುಳುಗಳನ್ನು ತಿನ್ನುವ ಕಣಜಗಳು ಅದರ ಗೂಡಿನಲ್ಲೇ ವಾಸಿಸುತ್ತವೆ ಮತ್ತು ಇರುವೆಗಳ ವಾಸನೆಯ ಜಾಡನ್ನೇ ಹಿಂಬಾಲಿಸುತ್ತವೆ. ಅಲ್ಲದೆ ಇರುವೆಗಳ ಆಕ್ರಮಣವನ್ನು ಹಿಮ್ಮೆಟ್ಟಿಸಲು ಫೆರೋಮೋನನ್ನೂ ಬಿಡುಗಡೆ ಮಾಡುತ್ತವೆ.

	ಜೇನು ಹುಳುಗಳು ಆಹಾರಮೂಲಗಳನ್ನೂ ಗುರುತಿಸಲು ಫೆರೋಮೋನುಗಳನ್ನು ಬಳಸುತ್ತವೆ. ಇಲ್ಲಿಯೂ ವೈಶಿಷ್ಟ್ಯ ಉಂಟು. ಒಂದು ಗೂಡಿನ ಜೇನುಹುಳು ವಿಸರ್ಜಿಸಿದ ಪರಿಮಳವನ್ನು ಅದೇ ಗೂಡಿನ ಇನ್ನೊಂದು ಹುಳು ಮಾತ್ರ ಗುರುತಿಸಬಲ್ಲದು. ಎಂದರೆ ಆಹಾರ ಸಂಪಾದನೆ ಸುಲಭವಾಗುತ್ತದೆ. ಹಲವಾರು ಹೂಗಳಲ್ಲಿ ಸಹ ಫೆರೋಮೋನುಗಳುಂಟು. ಜೇನನ್ನು ಆಕರ್ಷಿಸಲು ಹೂ ಫೆರೋಮೋನನ್ನು ಸೃಷ್ಟಿಸಿತೋ ಅಥವಾ ಜೇನು ಹುಳುಗಳು ಹೂವಿನ ಪರಿಮಳ ಅನುಕರಿಸುವ ವಸ್ತುವನ್ನು ತಯಾರಿಸಲು ಪ್ರಾರಂಭಿಸಿತೋ ಗೊತ್ತಿಲ್ಲ. ಹೂ ಜೇನುಗಳ ಸಂಬಂದ ವಿಚಿತ್ರವಾಗಿ ಪರಿಣಮಿಸಬಹುದು ಎಂಬುದನ್ನು ಆರ್ಕಿಡ್‍ಗಳ ಸಂದರ್ಭದಲ್ಲಿ ಕಾಣಬಹುದು. ಓಫ್ರಿಸ್ ಜಾತಿಯ ಆರ್ಕಿಡುಗಳು ಒಂಟಿ ಜೇನುಗಳನ್ನು ಆಕರ್ಷಿಸಲು ವಿಸ್ಮಯಕಾರಿ ತಂತ್ರವನ್ನು ಬಳಸುತ್ತವೆ. ಈ ಹೂ ಆಕಾರದಲ್ಲಿ ಗಾತ್ರದಲ್ಲಿ, ಮತ್ತು ಬಣ್ಣದಲ್ಲಿ ಹೆಣ್ಣು ಜೇನಿನ ಆಕಾರವನ್ನೇ ಹೋಲುತ್ತವೆ. ಹೂವಿನ ಪರಿಮಳದಿಂದ ಆಕರ್ಷಿತವಾದ ಗಂಡು, ಅದು ಹೆಣ್ಣೆಂದು ಭ್ರಮಿಸಿ, ಸಂಭೋಗಕ್ಕೆ ಪ್ರಯತ್ನಿಸುತ್ತದೆ. ಪರಾಗ ಕೀಟದ ಮೈಗೆ ಅಂಟಿಕೊಳ್ಳುತ್ತದೆ.

	ಫೆರೋಮೋನುಗಳ ಅಧ್ಯಯನದಿಂದ ಮಾನವ ಪರಿಸರ ನಿಯಂತ್ರಣದ ಬಗೆಯನ್ನು ಕಂಡುಕೊಳ್ಳಬಹುದು. ಅಲ್ಲದೆ ಅವನ ಆಹಾರಗಳನ್ನು ನಿರಂತರವಾಗಿ ನಾಶಮಾಡುವ ಕೀಟಗಳನ್ನು ತೊಡೆದುಹಾಕಲು ಇವನ್ನು ಸಾಧನವಾಗಿ ಬಳಸಬಹುದು. ಅವನು ಈಗ ಬಳಸುವ ರಾಸಾಯನಿಕ ವಸ್ತುಗಳು ಉದ್ದೇಶಿತ ಕೀಟಗಳನ್ನಲ್ಲದೆ ಇತರ ಜೀವಿಗಳನ್ನು ಸಹ ತೊಂದರೆಗೆ ಈಡುಮಾಡುತ್ತವೆ. ಅಲ್ಲದೆ ಆಹಾರ ಸರಪಣಿಯ ಮೂಲಕ ಕಡೆಗೆ ಅವನಿಗೆ ಅಪಾಯ ಒಡ್ಡುವ ಸಾಧ್ಯತೆ ಇದೆ. ಫೆರೋಮೋನುಗಳ ಬಳಕೆಯಿಂದ ಆಯ್ದ ರೀತಿಯಲ್ಲಿ ಜೀವಿಗಳನ್ನು ನಿಯಂತ್ರಿಸಬಹುದು. ಉದಾಹರಣೆಗೆ ಹೆಣ್ಣು ಫೆರೋಮೋನನ್ನು ಸಿಂಪಡಿಸಿ ಗಂಡು ಕೀಟಗಳನ್ನು ಆಕರ್ಷಿಸಿ ಅವನ್ನು ನಾಶಮಾಡಬಹುದು. ಈ ದಿಶೆಯಲ್ಲಿಯೇ ಇನ್ನು ಮುಂದೆ ಕೀಟ ನಿಯಂತ್ರಣ ಕಾರ್ಯಗಳು ಸಾಗಬೇಕು. ಇಲ್ಲದಿದ್ದರೆ ಮಾನವ ಬುಡಕಟ್ಟಿಗೇ ಕೊಡಲಿ ಪೆಟ್ಟು ಖಚಿತ.
(ಎಚ್.ಎಸ್‍ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ